ಬಂಟ್ವಾಳ: ಪಂಚಾಯಿತಿ ನೀರು ಸರಬರಾಜು ಕಡಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿದ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲವಾರು ಹಾಗೂ ಕಬ್ಬಿಣದ ರಾಡ್‌ಗಳಿಂದ ದಾಳಿ ನಡೆಸಿದ ಆರೋಪ ಕೇಳಿಬಂದಿದೆ.
ಸೆ.20ರಂದು ಸಂಜೆ ಕಮ್ಮಾಜೆಯ ಶ್ರೀ ಕಾವೇಶ್ವರ ಜನರಲ್ ಸ್ಟೋರ್ ಬಳಿ ಘಟನೆ ನಡೆದಿದೆ ಎನ್ನಲಾಗಿದ್ದು, ತೆಂಕಬೆಳ್ಳೂರು ನಿವಾಸಿ ಪ್ರಶಾಂತ್ ಬೆಳ್ಚಾಡ್ (41) ಗಾಯಗೊಂಡಿದ್ದಾರೆ.
ದೂರುದಾರರ ಆರೋಪದಂತೆ, ಮೂವರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ಬಂದು ಅವರ ಮೇಲೆ ದಾಳಿ ನಡೆಸಿದ್ದು, ತಲವಾರಿನಿಂದ ಕುತ್ತಿಗೆಗೆ ಬೀಸಿದಾಗ ಕೈ ಅಡ್ಡ ಇಟ್ಟ ಪರಿಣಾಮ ಗಾಯವಾಗಿದೆ. ಬಳಿಕ ಮತ್ತೊಮ್ಮೆ ದಾಳಿ ನಡೆಸಿದಾಗ ಕೈ ಹಾಗೂ ಕಿವಿಯ ಭಾಗಕ್ಕೂ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಂಚಾಯಿತಿ ಅನುಮತಿ ಇಲ್ಲದೆ ಅಳವಡಿಸಲಾಗಿದ್ದ ನೀರಿನ ಪೈಪ್‌ಗೆ ಸಂಬಂಧಿಸಿದಂತೆ ನೀರು ಸರಬರಾಜು ಕಡಿತಗೊಳಿಸಿದ್ದೇ ದ್ವೇಷಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಾಯಗೊಂಡ ಪ್ರಶಾಂತ್ ಅವರನ್ನು ಮೊದಲು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





