23 September 2026 |

ಮಂಗಳೂರಿನಲ್ಲಿ ಹೈವೋಲ್ಟೇಜ್ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಚಾಲಕ, ಸಹ ಪ್ರಯಾಣಿಕ ಪಾರು

  • 22 Sep 2026 07:38:13 PM

ಮಂಗಳೂರು: ವೇಗವಾಗಿ ಸಂಚರಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಹೈವೋಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಗರದ ಮರೋಳಿ ಬಳಿ ನಡೆದಿದೆ.

 

ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಚಾಲಕ ಹಾಗೂ ಸಹ ಪ್ರಯಾಣಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಪಡೀಲ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ವಿದ್ಯುತ್ ಕಂಬ ಮುರಿದು ಕಾರಿನ ಮೇಲೆಯೇ ಬಿದ್ದಿದೆ.

 

ಅಪಘಾತದ ತೀವ್ರತೆ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.