ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಕಲ್ಯಾ ಉಳಿಯಾರಗೋಳಿ ಗ್ರಾಮದ ಭರತ್ ನಗರದ ನಿವಾಸಿ ದಿನೇಶ್ ಶೆಟ್ಟಿಗಾರ (45) ಹಾಗೂ ಅವರ 5 ವರ್ಷದ ಮಗಳು ನಾಪತ್ತೆಯಾಗಿರುವ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 25ರಂದು ಸಂಜೆ ಸುಮಾರು 4 ಗಂಟೆಗೆ ಮಗಳ ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸುವುದಾಗಿ ತಿಳಿಸಿ ದಿನೇಶ್ ಅವರು ಮಗುವನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು. ಆದರೆ ಬಳಿಕ ತಂದೆ-ಮಗಳು ಇಬ್ಬರೂ ಮನೆಗೆ ಮರಳಿಲ್ಲ.
ಈ ಕುರಿತು ಆತಂಕಗೊಂಡ ಪತ್ನಿ ಶಿಲ್ಪಾ ಅವರು ದಿನೇಶ್ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಬಳಿಕ ಕೊತ್ತಲಕಟ್ಟೆ, ಕೊಲ್ನಾಡ್, ಕಿರಿಮಂಜೇಶ್ವರ, ಬೈಂದೂರು ಹಾಗೂ ಉಪ್ಪುಂದದಲ್ಲಿರುವ ಸಂಬಂಧಿಕರ ಮನೆಗಳಲ್ಲೂ ವಿಚಾರಿಸಲಾಗಿದೆ. ಆದರೂ ತಂದೆ-ಮಗಳ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹೀಗಾಗಿ ನಾಪತ್ತೆಯಾಗಿರುವ ದಿನೇಶ್ ಶೆಟ್ಟಿಗಾರ ಹಾಗೂ ಅವರ 5 ವರ್ಷದ ಮಗಳನ್ನು ಪತ್ತೆಹಚ್ಚುವಂತೆ ಶಿಲ್ಪಾ ಅವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರ ಪತ್ತೆಗೆ ಮುಂದಾಗಿದ್ದಾರೆ.





