04 October 2026 |

ಚರ್ಚ್ ಹಬ್ಬಕ್ಕೆ ತೆರಳಿದ್ದ ಕುಟುಂಬ: ಮನೆಯಲ್ಲಿ ₹6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

  • 03 Oct 2026 07:13:48 PM

ನೆಲ್ಯಾಡಿ: ಮನೆಯವರು ಚರ್ಚ್ ಹಬ್ಬದಲ್ಲಿ ಭಾಗವಹಿಸಲು ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯೊಂದಕ್ಕೆ ನುಗ್ಗಿ ಸುಮಾರು ₹6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ನಡೆದಿದೆ.

 

ಅಡ್ಡಹೊಳೆಯ ಕಕುತ್ತಿಲ್ ದಿ. ತೋಮಸ್ ಕೆ.ಎಸ್. ಅವರ ಪತ್ನಿ ಶಾಲಿನಿ (52) ಅವರ ಮನೆಯಲ್ಲಿ ಅ.1ರ ರಾತ್ರಿ ಈ ಕಳ್ಳತನ ಸಂಭವಿಸಿದೆ. ಶಾಲಿನಿ ಅವರು ಸಂಜೆ ಸುಮಾರು 6 ಗಂಟೆಗೆ ಮನೆಗೆ ಬೀಗ ಹಾಕಿ ಚರ್ಚ್‌ನಲ್ಲಿ ನಡೆಯುತ್ತಿದ್ದ ಹಬ್ಬಕ್ಕೆ ತೆರಳಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.

 

ಮನೆಯ ಹಿಂಬದಿಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿರುವ ಕಳ್ಳರು, ಮನೆಯಲ್ಲಿದ್ದ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

 

ಕಳವಾದ ಆಭರಣಗಳಲ್ಲಿ ಸುಮಾರು 25 ಗ್ರಾಂ ತೂಕದ ಮೂರು ಚಿನ್ನದ ಬಳೆಗಳು, 6 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್, 20 ಗ್ರಾಂ ತೂಕದ ನೆಕ್ಲೆಸ್ ಹಾಗೂ 24 ಗ್ರಾಂ ತೂಕದ ಚಿನ್ನದ ಸರ ಸೇರಿವೆ. ಒಟ್ಟು ಸುಮಾರು 75 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಇದರ ಅಂದಾಜು ಮೌಲ್ಯ ₹6 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ಈ ಕುರಿತು ಶಾಲಿನಿ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.