04 October 2026 |

ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು; ಆರೋಪಿಗೆ 1 ವರ್ಷ ಜೈಲು, ₹10 ಸಾವಿರ ದಂಡ

  • 03 Oct 2026 02:50:27 PM

ಕುಂದಾಪುರ: ತಾಲೂಕಿನ ಗಂಗೊಳ್ಳಿಯಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

 

2021ರ ಜನವರಿ 27ರಂದು ಗಂಗೊಳ್ಳಿಯ ಬಾಷಾ ಮೊಹಲ್ಲಾ ಪ್ರದೇಶದಲ್ಲಿ 48 ಚೀಲಗಳಲ್ಲಿ ಸುಮಾರು ₹36 ಸಾವಿರ ಮೌಲ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿತ್ತು. ಈ ಕುರಿತು ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ನೀಡಿದ ದೂರಿನ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

ಪ್ರಕರಣದ ತನಿಖೆಯನ್ನು ಅಂದಿನ ಗಂಗೊಳ್ಳಿ ಪಿಎಸ್‌ಐಗಳಾದ ಭೀಮಾಶಂಕರ್ ಹಾಗೂ ನಂಜಾ ನಾಯ್ಕ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ಪಿಎಸ್‌ಐ ಪವನ್ ನಾಯಕ್ ಅವರು ಪ್ರಕರಣದ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ಸಹಕರಿಸಿದ್ದರು.

 

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಕುಂದಾಪುರದ ಮೂರನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಣಿಕಂಠ ಎಂ.ಎಸ್. ಅವರು ಆ.1ರಂದು ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಲಾಗಿದೆ.

 

ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.