04 October 2026 |

ಬ್ರೇಕ್ ಫೇಲ್‌: ಮನೆ ಮೇಲೆ ಪಲ್ಟಿಯಾದ ಪ್ರವಾಸಿ ಬಸ್; 8 ಮಹಿಳೆಯರಿಗೆ ಗಾಯ

  • 03 Oct 2026 02:52:10 PM

ಶಿವಮೊಗ್ಗ: ಪ್ರವಾಸಕ್ಕೆ ತೆರಳುತ್ತಿದ್ದ ಪ್ರವಾಸಿ ಬಸ್‌ನ ಬ್ರೇಕ್‌ ಏಕಾಏಕಿ ಕೈಕೊಟ್ಟ ಪರಿಣಾಮ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಪಲ್ಟಿಯಾದ ಘಟನೆ ಸಾಗರ ತಾಲೂಕಿನ ಹೊಸಕೊಪ್ಪ ಸಮೀಪದ ಹಲಕೊಟ್ಟಿಗೆ ಕ್ರಾಸ್‌ ಬಳಿ ನಡೆದಿದೆ.

 

ಘಟನೆಯಲ್ಲಿ ಬಸ್‌ನಲ್ಲಿದ್ದ 7ರಿಂದ 8 ಮಂದಿ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಗೊಂಡವರನ್ನು ಹೊರತೆಗೆದಿದ್ದಾರೆ.

 

ದಾವಣಗೆರೆಯ ನಿಟ್ಟುವಳ್ಳಿಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ 24 ಮಹಿಳೆಯರು ಕೊಲ್ಲೂರು, ಸಿಗಂದೂರು ಹಾಗೂ ಬಳೆ ಪದ್ಮಾವತಿ ದೇವಸ್ಥಾನಕ್ಕೆ ಪ್ರವಾಸಕ್ಕೆ ಬಂದಿದ್ದರು. ಬಳೆ ಪದ್ಮಾವತಿ ದೇವಸ್ಥಾನದತ್ತ ತೆರಳುತ್ತಿದ್ದ ವೇಳೆ ಹಲಕೊಟ್ಟಿಗೆ ಕ್ರಾಸ್‌ ಬಳಿ ಬಸ್‌ನ ಬ್ರೇಕ್‌ ವಿಫಲವಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಮನೆಯೊಂದರ ಮೇಲೆ ಪಲ್ಟಿಯಾಗಿದೆ.

 

ಬಸ್‌ ಮನೆ ಮೇಲೆ ಬಿದ್ದ ಪರಿಣಾಮ ಕಟ್ಟಡಕ್ಕೆ ಹಾನಿಯಾಗಿದೆ. ಗಾಯಗೊಂಡವರಿಗೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.