04 October 2026 |

ಕರ್ತವ್ಯದಲ್ಲಿದ್ದಾಗ ವಿದ್ಯುತ್ ಸ್ಪರ್ಶ; ಬಂಟ್ವಾಳದ ಲೈನ್‌ಮ್ಯಾನ್ ರವಿ ಮೃತ್ಯು

  • 03 Oct 2026 06:36:29 PM

ಬಂಟ್ವಾಳ: ವಿದ್ಯುತ್‌ ಸಂಬಂಧಿತ ಕೆಲಸದಲ್ಲಿ ನಿರತರಾಗಿದ್ದ ವೇಳೆ ವಿದ್ಯುತ್‌ ಸ್ಪರ್ಶಕ್ಕೊಳಗಾಗಿ ಲೈನ್‌ಮ್ಯಾನ್‌ವೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲ್ಲೂಕಿನ ಕೆದಿಲದಲ್ಲಿ ನಡೆದಿದೆ.

 

ಮೃತರನ್ನು ಕೆದಿಲ ಪಾಟ್ರಕೋಡಿ–ಮಿತ್ತೂರು ಗಡಿಯಾರ ನಿವಾಸಿ ರವಿ ಎಂದು ಗುರುತಿಸಲಾಗಿದೆ. ಅವರು ಕೆದಿಲ ವ್ಯಾಪ್ತಿಯಲ್ಲಿ ಲೈನ್‌ಮ್ಯಾನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

 

ಶನಿವಾರ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ರವಿ ಅವರಿಗೆ ವಿದ್ಯುತ್‌ ಸ್ಪರ್ಶವಾಗಿದ್ದು, ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ನಿಖರ ಕಾರಣ ಸೇರಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

 

ರವಿ ಅವರು ಸ್ಥಳೀಯವಾಗಿ ಜನಪರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆಯ ಕುರಿತು ಕರೆ ಬಂದಾಗ ತಕ್ಷಣ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದ ಅವರು, ತಮ್ಮ ಸೇವೆಯ ಮೂಲಕ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

 

ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಸಂಭವಿಸಿದ ಈ ಅಕಾಲಿಕ ಸಾವು ಗ್ರಾಮಸ್ಥರಿಗೆ ಆಘಾತ ಉಂಟುಮಾಡಿದೆ. ರವಿ ಅವರ ನಿಧನದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ದುಃಖ ವ್ಯಕ್ತಪಡಿಸಿದ್ದು, ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.