24 October 2026 |

ಸುಳ್ಯ: ಹರ್ಲಡ್ಕದಲ್ಲಿ ಒಂದು ವರ್ಷದ ಆನೆ ಮರಿ ಸಾವು; ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು

  • 23 Oct 2026 07:25:16 PM

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಸಮೀಪದ ತೊಡಿಕಾನ ಗ್ರಾಮದ ಹರ್ಲಡ್ಕದಲ್ಲಿ ಸುಮಾರು ಒಂದು ವರ್ಷದ ಆನೆ ಮರಿಯೊಂದು ಮೃತಪಟ್ಟಿದೆ. ಸ್ಥಳೀಯರಾದ ಚಂದ್ರಶೇಖರ ಅವರ ತೋಟದಲ್ಲಿ ಈ ಘಟನೆ ನಡೆದಿದ್ದು, ಪ್ರದೇಶದಲ್ಲಿ ಆತಂಕ ಮೂಡಿಸಿದೆ.

 

ಭಾಗಮಂಡಲದ ಮೀಸಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳ ಹಿಂಡು ತೋಟಕ್ಕೆ ಪ್ರವೇಶಿಸಿ ಕಾಫಿ ಹಾಗೂ ಬಾಳೆ ಬೆಳೆಗಳಿಗೆ ಹಾನಿ ಉಂಟುಮಾಡಿದೆ ಎಂದು ತಿಳಿದುಬಂದಿದೆ.

 

ತೋಟವು ಎತ್ತರದ ಪ್ರದೇಶದಲ್ಲಿರುವುದರಿಂದ ಕಾಡಾನೆಗಳ ಹಿಂಡು ಮರಳಿ ಕಾಡಿನತ್ತ ಸಾಗುವ ವೇಳೆ ಆನೆ ಮರಿ ಜಾರಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಇತರ ಆನೆಗಳು ಮರಿಯ ಮೇಲೆ ಕಾಲಿಟ್ಟ ಪರಿಣಾಮ ಅದು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

 

ಆದರೆ, ಆನೆ ಮರಿಯ ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದ್ದು, ಕಾಡಾನೆಗಳ ಸಂಚಾರದಿಂದ ಕೃಷಿ ಬೆಳೆಗಳಿಗೆ ಉಂಟಾಗುತ್ತಿರುವ ಹಾನಿಯ ಬಗ್ಗೆಯೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.