24 October 2026 |

ಬಂಟ್ವಾಳದಲ್ಲಿ ಕೌಟುಂಬಿಕ ಕಲಹದ ಆರೋಪ: ಪತ್ನಿ ಸಾವು, ಪತಿ ಪೊಲೀಸ್ ವಶಕ್ಕೆ

  • 24 Oct 2026 12:19:13 PM

ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದಡಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

ಮೃತ ಮಹಿಳೆಯನ್ನು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ಸುನೀತಾ ಮಹಾದೇವ್ ದೇಸಂಗಿ (34) ಎಂದು ಗುರುತಿಸಲಾಗಿದೆ. ಅವರ ಪತಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್ (36) ಆರೋಪಿಯಾಗಿದ್ದಾರೆ. ದಂಪತಿ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವಾಸವಿದ್ದರು.

 

ದಂಪತಿಯ ನಡುವೆ ವೈವಾಹಿಕ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದ್ದು, ಈ ಹಿಂದೆ ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ್ದರು. ಹೆರಿಗೆಯ ಬಳಿಕ ತವರು ಮನೆಯಲ್ಲಿದ್ದ ಸುನೀತಾ ಅವರನ್ನು ಅಕ್ಟೋಬರ್ 4ರಂದು ಸಂಜೀವಕುಮಾರ್ ಮನೆಗೆ ಕರೆತಂದಿದ್ದ ಎಂದು ತಿಳಿದುಬಂದಿದೆ.

 

ಅಕ್ಟೋಬರ್ 22ರಂದು ಸುನೀತಾ ಅವರು ತಮ್ಮ ಸಹೋದರ ಅರುಣ್ ಮಹಾದೇವ್ ದೇಸಂಗಿ ಅವರಿಗೆ ಕರೆ ಮಾಡಿ, ಪತಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಮರುದಿನ ಬೆಳಗ್ಗೆ ಸಂಜೀವಕುಮಾರ್ ಕರೆ ಮಾಡಿ ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಅಕ್ಟೋಬರ್ 22ರ ರಾತ್ರಿ ಮತ್ತು ಅಕ್ಟೋಬರ್ 23ರ ಬೆಳಗಿನ ನಡುವೆ ಸಂಜೀವಕುಮಾರ್ ಹಲ್ಲೆ ನಡೆಸಿ ಸುನೀತಾ ಅವರ ಸಾವಿಗೆ ಕಾರಣನಾಗಿದ್ದಾನೆ ಎಂದು ಅರುಣ್ ದೂರು ನೀಡಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 142/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 103ರಂತೆ ಪ್ರಕರಣ ದಾಖಲಾಗಿದೆ.

 

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ತಿಳಿದುಬರಬೇಕಿದೆ.