24 October 2026 |

ಟೂರಿಸ್ಟ್ ವಾಹನ ಡಿಕ್ಕಿಯಾಗಿ ಕಮರಿಗೆ ಉರುಳಿದ ಶಾಲಾ ಬಸ್‌ – ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

  • 24 Oct 2026 09:19:01 AM

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಕೊಲ್ನಾಡುವಿನಲ್ಲಿ ಶಾಲಾ ಬಸ್‌ಗೆ ಟೂರಿಸ್ಟ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್‌ ರಸ್ತೆ ಬದಿಯ ಆಳವಾದ ಕಮರಿಗೆ ಉರುಳಿದ ಘಟನೆ ಅಕ್ಟೋಬರ್ 23ರ ಶುಕ್ರವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಇತರ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

 

ಮಂಗಳೂರಿನ ಕುಳಾಯಿ ಮೂಲದ ಖಾಸಗಿ ಶಾಲೆಗೆ ಸೇರಿದ ಬಸ್‌ ಕೊಲ್ನಾಡುಗುತ್ತು ಸಮೀಪ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್‌ ಯೂ-ಟರ್ನ್ ಪಡೆದು ವಿದ್ಯಾರ್ಥಿನಿಯೊಬ್ಬಳನ್ನು ಇಳಿಸಿದ ಬಳಿಕ ಮುಂದಕ್ಕೆ ಚಲಿಸುತ್ತಿದ್ದಾಗ, ಹಿಂಬದಿಯಿಂದ ವೇಗವಾಗಿ ಬಂದ ತಮಿಳುನಾಡು ನೋಂದಣಿಯ ಟೂರಿಸ್ಟ್ ವಾಹನವೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

 

ಡಿಕ್ಕಿಯ ತೀವ್ರತೆಗೆ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್‌ ರಸ್ತೆ ಪಕ್ಕದ ಕಮರಿಗೆ ಉರುಳಿ ಬಿದ್ದಿದೆ. ಘಟನೆಯಿಂದ ಬಸ್‌ಗೆ ಭಾರೀ ಹಾನಿಯಾಗಿದೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಒಟ್ಟು 17 ವಿದ್ಯಾರ್ಥಿಗಳಿದ್ದರು. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಶಾಲಾ ಬಸ್‌ ಚಾಲಕ ಹಾಗೂ ಟೂರಿಸ್ಟ್ ವಾಹನದ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.

 

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿ ಬಸ್‌ನಲ್ಲಿದ್ದ ಮಕ್ಕಳನ್ನು ಹೊರತೆಗೆದು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು.

 

ಮಾಹಿತಿ ತಿಳಿದು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.