ಆಟಿ ಅಮಾವಾಸ್ಯೆ ದಿನ ಪಾಲೆ ಮರದ ಕಷಾಯ ಕುಡಿಯುವುದು ಕೇವಲ ಒಂದು ಆಚರಣೆಯಲ್ಲ. ಅದು ಪೂರ್ತಿ ಆರೋಗ್ಯದ ದಿಕ್ಕಿನಲ್ಲಿ ನಮ್ಮ ಪೂರ್ವಜರ ಜ್ಞಾನವನ್ನು ಪ್ರತಿಬಿಂಬಿಸುವ ಆಧ್ಯಾತ್ಮದೊಂದಿಗೆ ವಿಜ್ಞಾನವೂ ಒಳಗೊಂಡಿರುವ ಆಚರಣೆಯಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುವ 'ಆಟಿ ಅಮಾವಾಸ್ಯೆ' ಹಬ್ಬ, ಆರೋಗ್ಯಪೂರ್ಣ ಜೀವನಕ್ಕೆ ಅನಾದಿ ಕಾಲದಿಂದಲೂ ಬಂದಿರುವ ಸಂಪ್ರದಾಯವಾಗಿದೆ. ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬರುವ ಈ ಅಮಾವಾಸ್ಯೆ ದಿನ, ವಿಶಿಷ್ಟವಾಗಿ ಪಾಲೆ ಮರದ ಕಷಾಯ ಸೇವಿಸುವುದು ಬಹುಮಾನ್ಯವಾದ ಸಂಪ್ರದಾಯ.
ಪಾಲೆ ಮರದ ಕಷಾಯ: ಪ್ರಕೃತಿಯ ಔಷಧ
ಪಾಲೆ ಮರವು ಆಯುರ್ವೇದದ ದೃಷ್ಟಿಯಿಂದ ಬಹುಪಯುಕ್ತವಾದ ಗುಣಗಳನ್ನು ಹೊಂದಿದೆ. ಈ ಮರದ ಪ್ರತಿಯೊಂದು ಭಾಗವು ಔಷಧೀಯ ಗುಣಗಳಿಂದ ಕೂಡಿವೆ. ಆಟಿ ಅಮಾವಾಸ್ಯೆ ದಿನ ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಪಾಲೆ ಮರದ ಕಷಾಯ ಕುಡಿಯುವುದು, ದೇಹದ ಒಳಗಿರುವ ವಿಷವಸ್ತುಗಳನ್ನು ತ್ಯಜಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ಹಾರ್ಮೋನಲ್ ಸಮತೋಲನ ಕಾಯ್ದುಕೊಳ್ಳಲು ಸಹಾಯಕ ಎಂದು ಹಿರಿಯರು ನಂಬಿದುದರಿಂದ ಈ ಆಚರಣೆ ಬಂದಿದೆ.
ಕಷಾಯ ತಯಾರಿಕೆಯ ವಿಧಾನ:
ಪಾಲೆ ಮರದ ತೊಗಟೆಯನ್ನು ನುಸುಕಿನಲ್ಲಿ ಮರದ ಹತ್ತಿರ ಹೋಗಿ ಕಲ್ಲಿನಿಂದ ಜಜ್ಜಿ ತೆಗೆದುಕೊಂಡು ಬರುವುದು ಸಂಪ್ರದಾಯ.
ಹಿಂದಿನ ಕಾಲದಲ್ಲಿ ಪೂರ್ವಜರು ಬೆಳಗಿನ ಜಾವಾ 4-5 ಗಂಟೆಯ ಒಳಗೆ ಪಾಲೆ ಮರದ ತೊಗಟೆ ತೆಗೆದುಕೊಂಡು ಬರುತ್ತಿದ್ದರು. ಅವರ ಪ್ರಕಾರ, ತೊಗಟೆ ತೆಗೆಯುವ ಸಂದರ್ಭದಲ್ಲಿ ಬೇರೆ ಯಾರು ನೋಡಬಾರದು ಎನ್ನುವ ಉದ್ದೇಶ ಮತ್ತು ರೂಢಿಯಾಗಿತ್ತು.
ಮನೆಗೆ ತಂಡ ತೊಗಟೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅದರ ರಸ ತೆಗೆದು ತುಳಸಿ, ಕಾಳುಮೆಣಸು, ಶುಂಠಿ, ಓಮ ಸೇರಿಸಿ, ಬೆಳ್ಕಲ್ಳನ್ನು ಕಾಯಿಸಿ ಒಗ್ಗರಣೆ ಕೊಟ್ಟು ನಂತರ ಮನೆಯವರು ಒಟ್ಟಿಗೆ ಸೇರಿ ಕುಡಿಯಬೇಕು.
ನಂತರ ಒಂದು ಗಂಟೆ ಕಳೆದ ನಂತರ ಮೆಂತೆ ಗಂಜಿ ಸೇವಿಸಲೇಬೇಕು.
ಧಾರ್ಮಿಕ ಹಾಗೂ ಸಾಮಾಜಿಕ ಅಂಶ:
ಆಟಿ ಅಮಾವಾಸ್ಯೆ ಒಂದು ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ಮಳೆಗಾಲದ ಮಧ್ಯಭಾಗದಲ್ಲಿ, ಶರೀರದಲ್ಲಿ ಜಮೆಯಾಗಿರುವ ಶೀತ, ನವಜೀವನದ ಇಚ್ಛೆ, ನಿರ್ಭರಿತ ಜೀವನ ಶೈಲಿಗೆ ಒತ್ತುಗಟ್ಟಿದ ಒಂದು ಸಮಯ. ಕುಟುಂಬ ಸದಸ್ಯರುಗಳು ಬೆಳಿಗ್ಗೆ ಎದ್ದೊಡನೆ ಸ್ನಾನ ಮಾಡಿ, ಕಷಾಯ ಕುಡಿದು, ನಂತರ ವಿಶಿಷ್ಟ ರೀತಿಯ ಆಹಾರವನ್ನು ತಿಂದು ದಿನವನ್ನು ವಿಶ್ರಾಂತಿಯಿಂದ ಕಳೆಯುತ್ತಾರೆ.