27 June 2026 |

ಎನ್‌ಆರ್‌ಐ(NRI) ಸಚಿವಾಲಯ ಸ್ಥಾಪನೆಗೆ ಆಗ್ರಹ: ಜೂನ್ 26ರಂದು ಅನಿವಾಸಿ ಕನ್ನಡಿಗರ ಜಾಗತಿಕ ಎಕ್ಸ್ (ಟ್ವಿಟ್ಟರ್) ಅಭಿಯಾನ

  • 26 Jun 2026 12:46:45 AM

ಬೆಂಗಳೂರು: ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಯಾದ ಪ್ರತ್ಯೇಕ ಎನ್‌ಆರ್‌ಐ ಸಚಿವಾಲಯ ಸ್ಥಾಪನೆ ಹಾಗೂ ಡಾ. ಆರತಿ ಕೃಷ್ಣ ಅವರನ್ನು ಎನ್‌ಆರ್‌ಐ ಸಚಿವರಾಗಿ ನೇಮಿಸುವಂತೆ ಒತ್ತಾಯಿಸಿ ಕರ್ನಾಟಕ ಅನಿವಾಸಿ ಒಕ್ಕೂಟವು ಜೂನ್ 26ರಂದು ಜಾಗತಿಕ ಮಟ್ಟದಲ್ಲಿ X (ಹಿಂದಿನ ಟ್ವಿಟರ್) ಅಭಿಯಾನ ನಡೆಸಲು ಮುಂದಾಗಿದೆ.

 

ಈ ಅಭಿಯಾನವು ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಆರಂಭವಾಗಲಿದ್ದು, ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಮತ್ತು ಕನ್ನಡಾಭಿಮಾನಿಗಳು ಒಂದೇ ವೇದಿಕೆಯಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲಿದ್ದಾರೆ.

 

ಒಕ್ಕೂಟದ ಪ್ರಕಾರ, ರಾಜ್ಯ ಸರ್ಕಾರದಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಗಳು, ಕಲ್ಯಾಣ, ಹೂಡಿಕೆ, ಶಿಕ್ಷಣ ಹಾಗೂ ಇತರೆ ವಿಚಾರಗಳಿಗೆ ಪ್ರತ್ಯೇಕ ಸಚಿವಾಲಯ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಮುಖ ಆಗ್ರಹವಾಗಿದೆ.

 

ಇದರ ಜೊತೆಗೆ, ಅನಿವಾಸಿ ಕನ್ನಡಿಗರ ಪರವಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಡಾ. ಆರತಿ ಕೃಷ್ಣ ಅವರಿಗೆ ಎನ್‌ಆರ್‌ಐ ಸಚಿವರ ಜವಾಬ್ದಾರಿ ನೀಡಬೇಕು ಎಂಬ ಬೇಡಿಕೆಯೂ ಅಭಿಯಾನದ ಪ್ರಮುಖ ಅಂಶವಾಗಿದೆ.

 

ಈ ಅಭಿಯಾನಕ್ಕೆ ಈಗಾಗಲೇ ವಿವಿಧ ದೇಶಗಳ ಕನ್ನಡ ಸಂಘಟನೆಗಳು ಹಾಗೂ ಅನಿವಾಸಿ ಕನ್ನಡಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜೂನ್ 26ರ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಧ್ವನಿಯನ್ನು ಸರ್ಕಾರದ ಗಮನಕ್ಕೆ ತಲುಪಿಸುವಂತೆ ಕರ್ನಾಟಕ ಅನಿವಾಸಿ ಒಕ್ಕೂಟ ಮನವಿ ಮಾಡಿದೆ.