ಯುಎಇ: ದುಬೈಯಲ್ಲಿರುವ ಹೆಸರುವಾಸಿ 'ದುಬೈ ಯಕ್ಷಗಾನ ಅಭ್ಯಾಸ ಕೇಂದ್ರ' ತಂಡವು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಕಳೆದ ದಶಕದಿಂದ ತುಳುನಾಡಿನ ಜಾನಪದ ಪರಂಪರೆಯನ್ನು ವಿದೇಶದಲ್ಲೂ ಜೀವಂತವಾಗಿಟ್ಟಿದೆ. ಜೂನ್ 29, ಆದಿತ್ಯವಾರದಂದು ದುಬೈ ಯಕ್ಷಗಾನ ಅಭ್ಯಾಸ ಕೇಂದ್ರದ ಅದ್ದೂರಿಯ 'ದುಬೈ ಯಕ್ಸೋತ್ಸವ 2025' ಕಾರ್ಯಕ್ರಮ ನಡೆಯಲಿದೆ.
ಯಕ್ಷಧ್ರುವ ಫೌಂಡೇಶನ್ ದುಬೈ ಘಟಕದ ಸಂಯೋಗದೊಂದಿಗೆ, ದುಬೈ ಕರಾಮದ ಇಂಡಿಯನ್ ಹೈಸ್ಕೂಲ್ ಶೇಖ್ ರಶೀದ್ ಆಡಿಟೋರಿಯಂ ನಲ್ಲಿ ಬೆಳಿಗ್ಗೆ 9:00 ರಿಂದ ಸಂಜೆ ಗಂಟೆ 7:00 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದರಾದ ಕಾಸರಗೋಡು ಸುಬ್ರಾಯ ಹೊಳ್ಳರಿಗೆ 'ಯಕ್ಷ ಶ್ರೀರಕ್ಷಾ' ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಇದರ ಜೊತೆಗೆ ಯುಎಇಯ ಏಳು ಮಂದಿ ಸಾಧಕರು ಹಾಗೂ ಮೂರು ಸಂಸ್ಥೆಗಳನ್ನು ಗೌರವಿಸಿ ಸನ್ಮಾನಿಸಲಿದ್ದಾರೆ.
ಕೀರ್ತಿಶೇಷ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ವಿರಚಿತ 'ಶಿವಾನಿ ಸಿಂಹವಾಹಿನಿ' ಅದ್ಧೂರಿಯ ಐದು ಗಂಟೆಗಳ ತಡೆರಹಿತ ಯಕ್ಷಗಾನ ಪ್ರದರ್ಶನ ಕೇಂದ್ರದ ಕಲಾವಿದರು ಮತ್ತು ಊರಿನ ಪ್ರಖ್ಯಾತ ಕಲಾವಿದರ ಪೈಪೋಟಿಯ ಪ್ರದರ್ಶನ ನೆರವೇರಲಿದೆ.
ಕೇಂದ್ರ ಬಿಂದುಗಳಾದ ಭಾಗವತರು ಶ್ರೀಗಳಾದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ, ಶ್ರೀದೇವಿಪ್ರಸಾದ್ ಆಳ್ವ ತಲಪಾಡಿ, ಶ್ರೀಮತಿ ಕಾವ್ಯಶ್ರೀ ಅಜೇರು, ಶ್ರೀ ಕೃಷ್ಣ ಪ್ರಸಾದ್ ರಾವ್ ಸುರತ್ಕಲ್ ಇವರುಗಳ ಭಾಗವತಿಕೆಯಲ್ಲಿ ಗಾನ ವೈಭವ ನಡೆಯಲಿದೆ.
ದುಬೈ ಯಕ್ಷಗಾನ ಅಭ್ಯಾಸ ಕೇಂದ್ರ ತಂಡದ 10ನೇ ವಾರ್ಷಿಕೋತ್ಸವವನ್ನು ಯುಎಇಯ ತುಳುನಾಡಿನ ಜನರು ಉತ್ಸಾಹಭರಿತವಾಗಿ ಆಚರಿಸುತ್ತಿದ್ದಾರೆ. ಎಲ್ಲರ ಆಗಮನದ ನಿರೀಕ್ಷೆಯಲ್ಲಿದೆ ದುಬೈ ಯಕ್ಷಗಾನ ಅಭ್ಯಾಸ ಕೇಂದ್ರ.