ಮುಂಬಯಿ: ಜೂನ್ 21ರಿಂದ ಜೂನ್ 25ರವರೆಗೆ ಐದು ದಿನಗಳ ಕಾಲ, ಮುಂಬಯಿಯ ವಿವಿಧ ಭಾಗಗಳಲ್ಲಿ 'ತಲಕಳ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ'ವು ಯೋಗಾಕ್ಷಿ ಗಣೇಶ್ ತಲಕಳ ಅವರ ಮುಂದಾಳತ್ವದಲ್ಲಿ ಚೆಂಡೆ-ಮದ್ದಳೆ-ಭಾಗವತಿಕೆ-ಚಕ್ರತಾಳದಿಂದ ಹಿಡಿದು, ರಂಗ ಸಹಾಯಕರವರೆಗೆ, ಎಲ್ಲದಕ್ಕೂ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು ಕಿಕ್ಕಿರಿದ ಸಭಾಂಗಣದಲ್ಲಿ ಪ್ರದರ್ಶನ ನೀಡುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ.
ಶ್ರೀದೇವಿ ಮಹಾತ್ಮೆ ಯಕ್ಷಗಾನವು ಊರಿನಲ್ಲಿರುವಂತೆಯೇ ಬ್ಯಾಂಡು-ವಾದ್ಯಗಳ ಹಿತಮಿತವಾದ ಬಳಕೆಯೊಂದಿಗೆ ಮೇಳ ನಡೆಸಿದ್ದು ವಿಶೇಷವಾಗಿತ್ತು. ದೇವಿ ಮಹಾತ್ಮೆ ಊರಿನಲ್ಲಿ ಅತೀ ಹೆಚ್ಚು ಪ್ರದರ್ಶನಗೊಳ್ಳುವ ಪ್ರಸಂಗವಾದರೂ, ಅದನ್ನು ನಿಭಾಯಿಸುವುದು ಮತ್ತು ಅಲ್ಲಿನ ಸಭಾ ಕಾರ್ಯಕ್ರಮದ ದೀರ್ಘತೆಗೆ ಅನುಗುಣವಾಗಿ ಕಿರಿದುಗೊಳಿಸಿ, ಸೂಕ್ತ ಸಮಯದಲ್ಲಿ ಮುಗಿಸುವುದು ದೊಡ್ಡ ಸವಾಲಾಗಿದ್ದರು, ಮುಂಬೈಯ ಮಹಿಳಾ ತಂಡ ಅತ್ಯುತ್ತಮ ಪ್ರದರ್ಶನ ನೀಡಿ, ಮುಂಬೈ ಪ್ರೇಕ್ಷಕರ ಮುಕ್ತ ಕಂಠದ ಪ್ರಶಂಶೆಗೆ ಪಾತ್ರವಾಗಿತ್ತು.
ಐದೂ ದಿನಗಳಿಗಾಗಿ ಈ ತಂಡಗಳ ಪ್ರಾಯೋಜಕತ್ವವನ್ನು ವಹಿಸಿ ಯಕ್ಷಗಾನ ಪ್ರೀತಿಯುಳ್ಳ ಮುಂಬೈ ಉದ್ಯಮಿ, ಕಲಾ ಪೋಷಕ, ಸಂಘಟಕರಾದ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅಜೆಕಾರು ಕಲಾಭಿಮಾನಿ ಬಳಗ(ರಿ.) ಹೆಸರಿನಲ್ಲಿ ಕಳೆದ 24 ವರ್ಷಗಳಿಂದ ಮುಂಬಯಿಯಲ್ಲಿ ಯಕ್ಷಗಾನ ಮತ್ತು ಇತರ ಕಲೆಗಳನ್ನು ಪೋಷಿಸುತ್ತಾ ಬಂದಿರುವ ಬಗ್ಗೆ ತಿಳಿಸಲಾಗಿದೆ. ಖ್ಯಾತಿಯಾಗದ ಎಲೆಮರೆಯ ಕಾಯಿಯಂತಿದ್ದ ಪ್ರತಿಭಾನ್ವಿತರ ತಂಡವನ್ನು ಕರೆಸಿ ಮುಂಬೈನಲ್ಲಿ ಪ್ರದರ್ಶನ ಮಾಡಿಸಿ ಗೆದ್ದಿದ್ದಾರೆ ಎಂದು ಯಕ್ಷಗಾನ ವೆಬ್ ಸೈಟ್ ನಲ್ಲಿ ಪ್ರಶಂಶೆಯ ಮಾತನ್ನು ವ್ಯಕ್ತಪಡಿಸಿದ್ದಾರೆ.