ಬಂಟ್ವಾಳ: ತುಳುನಾಡಿನ ಪ್ರಸಿದ್ಧ ಧಾರ್ಮಿಕ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಬಂಟ್ವಾಳ ತಾಲ್ಲೂಕಿನ ಕಾರಿಂಜೇಶ್ವರ ದೇವಸ್ಥಾನದಲ್ಲಿ ಈ ಬಾರಿಯ ಆಟಿ ಅಮಾವಾಸ್ಯೆ ಜುಲೈ 24, 2025 ರಂದು ಪವಿತ್ರ ತೀರ್ಥಸ್ನಾನ ಕಾರ್ಯಕ್ರಮವು ವಿಶೇಷವಾಗಿ ನಡೆಯಲಿದೆ. ದೇವಾಲಯ ಆಡಳಿತ ಸಮಿತಿಯು ಈ ದಿನದಂದು ಬೆಳಗ್ಗೆ 3.00 ಗಂಟೆಗೆ ಭಕ್ತರಿಗೆ ತೀರ್ಥಸ್ನಾನದ ಅವಕಾಶ ಕಲ್ಪಿಸಲಾಗುವುದು.
ಭಕ್ತರು ಬೆಳ್ಳಂಬೆಳಗ್ಗೆ ದೇವಾಲಯದ ನೈಸರ್ಗಿಕ ತೀರ್ಥಸ್ಥಾನಗಳಲ್ಲಿ – ಗದಾ ತೀರ್ಥ, ಅಂಗುಷ್ಠ ತೀರ್ಥ ಮತ್ತು ಜಾನು ತೀರ್ಥಗಳಲ್ಲಿ ಸ್ನಾನ ಮಾಡಿ ಪುಣ್ಯ ಸಂಪಾದಿಸಬಹುದಾಗಿದೆ.
ದೇವಾಲಯ ಆಡಳಿತ ಮಂಡಳಿಯು ಭಕ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. ಸಾರ್ವಜನಿಕರಿಗೆ ಶುಚಿತ್ವ ಕಾಪಾಡಲು ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಯಲು ಸಹಕಾರವನ್ನು ಮನವಿ ಮಾಡಲಾಗಿದೆ.
ಆಟಿ ಅಮಾವಾಸ್ಯೆಯ ದಿನದಂದು ತೀರ್ಥಸ್ನಾನ ಮಾಡಿದರೆ ಪಾಪಕ್ಷಯ, ದೈಹಿಕ-ಮಾನಸಿಕ ಶುದ್ಧತೆ ಹಾಗೂ ಧಾರ್ಮಿಕ ಶಕ್ತಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.