ಬೆಂಗಳೂರು: ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿಯ ವತಿಯಿಂದ ಹಮ್ಮಿಕೊಂಡಾಗಿರುವ “ಆಗಮ ಘಟಿಕೋತ್ಸವ-2025” ಕಾರ್ಯಕ್ರಮವು ಬೆಂಗಳೂರಿನ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಸಂಭ್ರಮದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮ ಶಾಸ್ತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು. ಸುಮಾರು 2000 ವಿದ್ಯಾರ್ಥಿಗಳ ಪೈಕಿ 43 ಮಂದಿ ಉತ್ತೀರ್ಣರಾದವರಲ್ಲಿ ವಿಶೇಷವಾಗಿ ವಿಶಿಷ್ಟ ಸಾಧನೆ ಮೆರೆದವರನ್ನು ಗುರುತಿಸಲಾಗಿದ್ದು, ವಾತುಲಾಗಮ ವಿಭಾಗದಲ್ಲಿ ಉತ್ಕೃಷ್ಟ ಅಂಕ ಪಡೆದ ಪೊಳಲಿಯ ಗಿರಿಪ್ರಕಾಶ್ ತಂತ್ರಿ ಹಾಗೂ ಪುತ್ತೂರಿನ ಪ್ರಸಿದ್ಧ ವಾಸ್ತುತಜ್ಞ ಪಿ.ಜಿ. ಜಗನ್ನಿವಾಸ ರಾವ್ ರವರಿಗೆ “ವಾತುಲಾಗಮ ಪ್ರವೀಣ” ಎಂಬ ಗೌರವ ಪದವಿಯನ್ನು ನೀಡಲಾಯಿತು.
ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ, ಆಯುಕ್ತ ಡಾ. ವೆಂಕಟೇಶ್ ಎಂ.ವಿ (ಐಎಎಸ್), ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಸೇರಿದಂತೆ ಅನೇಕ ಗಣ್ಯರು ಸಮ್ಮಾನಪೂರ್ವಕವಾಗಿ ನೀಡಿ ಗೌರವಿಸಿದರು. ಪ್ರಶಸ್ತಿಯೊಂದಿಗೆ ಶಾಸ್ತ್ರ ಪ್ರಮಾಣಪತ್ರ, ಪದಕ ಮತ್ತು ನಗದು ಬಹುಮಾನವೂ ಹಸ್ತಾಂತರಿಸಲಾಯಿತು.
ಪಿ.ಜಿ. ಜಗನ್ನಿವಾಸ ರಾವ್ ಮಂಗಳೂರು ವಿಶ್ವವಿದ್ಯಾನಿಲಯದಿಂದ ವೇದ ತಂತ್ರಾಗಮದಲ್ಲಿ ಡಿಪ್ಲೋಮಾ ಪಡೆದಿದ್ದು, ಪ್ರಸ್ತುತ ಪುತ್ತೂರು ನಗರಸಭೆಯ ಸದಸ್ಯರಾಗಿದ್ದಾರೆ. ಅವರು ಹಲವಾರು ದೇವಾಲಯಗಳು ಮತ್ತು ದೈವಸ್ಥಾನಗಳಿಗೆ ವಾಸ್ತುಸಲಹೆ ನೀಡುತ್ತಾ, ಧಾರ್ಮಿಕ ಹಾಗೂ ಶಿಲ್ಪ ಪರಂಪರೆಯ ಪ್ರಗತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.