ಬಂಟ್ವಾಳ: ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘಗಳನ್ನು ಕಟ್ಟಿ ಶಾಲೆಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿರುವ ಹಲವು ವಿದ್ಯಾಮಾನಗಳನ್ನು ನಾವು ಕೇಳಿದ್ದೇವೆ. ಆದರೆ ರಾಜ್ಯದಲ್ಲಿಯೇ ಪ್ರಥಮ ಪ್ರಯೋಗ ಎನ್ನುವಂತೆ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಸಮುದಾಯವನ್ನು ಪ್ರೇರೆಪಿಸುವ ದಿಟ್ಟ ಪ್ರಯತ್ನಕ್ಕೆ ಬಂಟ್ವಾಳ ತಾಲೂಕು ಮುಂದಾಗಿದೆ.
ಜಿಲ್ಲಾ ಮಟ್ಟದ ಅಧಿಕಾರಿಗಳ ಸೂಚನೆಯಂತೆ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರಿಕಲ್ಪನೆಯಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಅಂಗನವಾಡಿಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ರಚನಾ ಪ್ರಕ್ರಿಯೆ ನಡೆಯುತ್ತಿದೆ.
ಅಂಗನವಾಡಿ ಕೇಂದ್ರಗಳ ಮುನ್ನಡೆಗೆ ಸಮುದಾಯದ ಸಹಭಾಗಿತ್ವ ಅಗತ್ಯ ಈ ಹಿನ್ನೆಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘಗಳನ್ನು ಸ್ಥಾಪಿಸುವ ಸೂಚನೆಯನ್ನು ಜಿಲ್ಲೆಯಿಂದ ನೀಡಲಾಗಿತ್ತು. ಅದರಂತೆ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು ತಾಲೂಕಿನ ಬಂಟ್ವಾಳ ವಲಯದ 341 ಅಂಗನವಾಡಿ ಕೇಂದ್ರಗಳ ಪೈಕಿ 48 ಕೇಂದ್ರಗಳಲ್ಲಿ ಹಾಗೂ ವಿಟ್ಲ ವಲಯದ 229 ಅಂಗನವಾಡಿ ಕೇಂದ್ರಗಳ ಪೈಕಿ 29 ರಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದೆ. ಕೆಲವು ಕಡೆ ಪ್ರಗತಿಯಲ್ಲಿದೆ ಎನ್ನುತ್ತಾರೆ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಾರದ ಶ್ರೀಮತಿ ಲೀಲಾವತಿ.
ಯಾರ್ಯಾರು ಇರುತ್ತಾರೆ?
ಅಂಗನವಾಡಿ ಕೇಂದ್ರಗಳಲ್ಲಿ ಆಡಿ ಬೆಳೆದವರನ್ನೇ ಕೇಂದ್ರಗಳ ಹಿರಿಯ ವಿದ್ಯಾರ್ಥಿ ಸಂಘಗಳ ಸದಸ್ಯರನ್ನಾಗಿ ಮಾಡಲಾಗುತ್ತದೆ. 'ನಾನು ದಾಸಕೋಡಿ ಅಂಗನವಾಡಿ ಕೇಂದ್ರದಲ್ಲಿ 1998 ರಿಂದ ಅಂಗನವಾಡಿ ಕಾರ್ಯಕರ್ತೆಯಾಗಿದ್ದೇನೆ. ಈ ಅವಧಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಪುಟಾಣಿಗಳಾಗಿ ಸೇರಿ, ಇಲ್ಲೇ ಆಡಿ ಬೆಳೆದು ದೊಡ್ಡವರಾದವರನ್ನು ಸೇರಿಸಿಕೊಂಡು ಸಂಘ ರಚಿಸಿದ್ದೇನೆ, ಕೇಂದ್ರದ ಅಭಿವೃದ್ಧಿಗೆ ಅವರು ಸಹಕಾರ ಕೊಡುವ ನಿರೀಕ್ಷೆ ಇದೆ ಎನ್ನುತ್ತಾರೆ' ಬಾಳ್ತಿಲ ಗ್ರಾಮ ಪಂಚಾಯತ್ ನ ದಾಸಕೋಡಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಲಿತ.
ಈ ಹಿಂದೆ ಅಂಗನವಾಡಿಗಳಲ್ಲಿ ಪುಟಾಣಿ ಹೆಜ್ಜೆಗಳನ್ನು ಇಡುತ್ತಾ ಆಡಿ ಬೆಳೆದು ಮಕ್ಕಳನ್ನು ಮತ್ತೆ ಶಾಲೆಗೆ ಕರೆಸಿ ಸಂಘ ಸ್ಥಾಪಿಸಿ ಆ ಮುಖೇನ ಅಂಗನವಾಡಿ ಕೇಂದ್ರವನ್ನು ಸರ್ವೋತೋಮುಖ ಅಭಿವೃಗೊಳಿಸುವುದು ಈ ಹಿರಿಯ ವಿದ್ಯಾರ್ಥಿ ಸಂಘ ರಚನೆಯ ಮೂಲ ಉದ್ದೇಶ ಜೊತೆಗೆ ಸಮುದಾಯಕ್ಕೆ ಇಲಾಖೆಯ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿ ಸಮುದಾಯದ ಸಹಭಾಗೀತ್ವ ಪಡೆದುಕೊಳ್ಳುವುದು, ಸಿಎಸ್ ಆರ್ ಅನುದಾನ ಪಡೆದುಕೊಳ್ಳುವುದು ಹಾಗೂ ಸಮರ್ಪಕ ಬಳಕೆ, ನಿಯಮಿತ ಸಂವಹನ, ಸಮುದಾಯ ಸೇವಾ ಕಾರ್ಯಕ್ರಮ, ಹಳೇ ವಿದ್ಯಾರ್ಥಿ ಮತ್ತು ಅಂಗನವಾಡಿ ಕೇಂದ್ರದ ಬಾಂಧವ್ಯವನ್ನು ಬಳಪಡಿಸುವುದು, ಅಂಗನವಾಡಿ ಕೇಂದ್ರಕ್ಕೆ ಬೇಕಿರುವ ಮೂಲಭೂತ ಸೌಲಭ್ಯ ದೊರಕಿಸಲು ಮುಂದಾಗುವುದು, ರಾಷ್ಟ್ರೀಯ ಹಬ್ಬಗಳ ಆಚರಣೆ, ಮಕ್ಕಳ ಹುಟ್ಟುಹಬ್ಬ ಆಚರಣೆ, ಅಂಗನವಾಡಿ ಕಟ್ಟಡದ ಸುಸ್ಥಿತಿಯನ್ನು ಕಾಯ್ದುಕೊಳ್ಳುವುದು ಮೊದಲಾದ ನಿರೀಕ್ಷಿಗಳನ್ನು ಈ ಮೂಲಕ ಇರಿಸಿಕೊಳ್ಳಲಾಗಿದೆ.
ಅಂಗನವಾಡಿ ಕೇಂದ್ರಗಳ ಮೇಲುಸ್ತುವಾರಿ ನೋಡಿಕೊಳ್ಳಲು ಸರ್ಕಾರದಿಂದ ನಿರ್ದೇಶನಗೊಂಡಿರುವ ಬಾಲವಿಕಾಸ ಸಮಿತಿ ಸದಸ್ಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಮಕ್ಕಳ ಪೋಷಕರು ಅಂಗನವಾಡಿ ಕೇಂದ್ರಗಳಿಗೆ ಕೇಂದ್ರಕ್ಕೆ ಶಕ್ತಿ ತುಂಬುತ್ತಿದ್ದು, ಇದೀಗ ಬಾಳ್ತಿಲ ಗ್ರಾಮದ ದಾಸಕೋಡಿ ಅಂಗನವಾಡಿಯ ಬೆಳಕು ಹಿರಿಯ ವಿದ್ಯಾರ್ಥಿ ಸಂಘ ರಚನೆಗೊಂಡಿದ್ದು ಅಧ್ಯಕ್ಷರಾಗಿ ದೀಕ್ಷಿತ್ , ಕಾರ್ಯದರ್ಶಿ ಶ್ರೀಮತಿ ಮಮತಾ, ಕೋಶಾಧಿಕಾರಿ ಆತ್ರೆಯ ಅಡ್ಯಂತಾಯ ಇವರನ್ನು ನೇಮಕ ಮಾಡಲಾಗಿದೆ. ಜೊತೆಗೆ ಹಿರಿಯ ವಿದ್ಯಾರ್ಥಿಗಳು ಭಾಗಹಿಸಿದ್ದಾರೆ. ಜೇನು ಕೃಷಿ ಇಲಾಖೆಯ ಅಧ್ಯಕ್ಷರಾದ ಪಿ. ಎಸ್. ಮೋಹನ್, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರಕ್ಷಿತಾ ಹಾಗೂ ಪೋಷಕರು ಮತ್ತು ಅಂಗನವಾಡಿ ಸಹಾಯಕಿ ಹಾಜರಿದ್ದರು. ಶ್ರೀಮತಿ ಕವಿತಾ ಅಡ್ಯಂತಾಯ ಸ್ವಾಗತಿಸಿದರು. ಶ್ರೀಮತಿ ಪದ್ಮಿನಿ ವಂದನಾರ್ಪಣೆ ಮಾಡಿದರು.