19 June 2026 |

ಪಾದೆಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ದುರಂತ; ಟಿಪ್ಪರ್ ಲಾರಿ ಚಲಿಸಿ ಚಾಲಕ ಸಾವು!

  • 18 Jun 2026 02:08:42 PM

ವಿಟ್ಲ: ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವುಗುಡ್ಡೆ ಪ್ರದೇಶದಲ್ಲಿರುವ ಗಣಿಗಾರಿಕೆ ಸ್ಥಳದಲ್ಲಿ ಗುರುವಾರ ಬೆಳಿಗ್ಗೆ ನಡೆದ ದುರ್ಘಟನೆಯಲ್ಲಿ ಟಿಪ್ಪರ್ ಲಾರಿ ಚಾಲಕರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಧರ್ಮಸ್ಥಳ ಭಾಗದ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.

 

ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಗಣಿಗಾರಿಕೆ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಟಿಪ್ಪರ್ ಲಾರಿಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ದೋಷವನ್ನು ಸರಿಪಡಿಸುವ ಉದ್ದೇಶದಿಂದ ಚಾಲಕ ಮಹೇಶ್ ಲಾರಿಯ ಕೆಳಭಾಗಕ್ಕೆ ಇಳಿದು ದುರಸ್ತಿ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಲಾರಿ ಅನಿರೀಕ್ಷಿತವಾಗಿ ಚಲಿಸಿದ್ದು, ಅದರ ಅಡಿಗೆ ಸಿಲುಕಿದ ಮಹೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

ಅಪಘಾತ ಸಂಭವಿಸಿದ ಕೂಡಲೇ ಅಲ್ಲಿದ್ದ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ, ಲಾರಿಯ ಅಡಿಯಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

 

ಇದೇ ವೇಳೆ, ಪ್ರದೇಶದಲ್ಲಿ ನಡೆಯುತ್ತಿದೆ ಎನ್ನಲಾದ ಬಾಕ್ಸೈಟ್ ಗಣಿಗಾರಿಕೆ ಚಟುವಟಿಕೆಗಳ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಗಣಿಗಾರಿಕೆ ಲಾರಿಗಳ ಸಂಚಾರದಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದ್ದರೆಂದು ಆರೋಪಿಸಲಾಗಿದೆ. ಈ ಕುರಿತಂತೆ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದರೂ, ಸಂಬಂಧಿತ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

 

ಸಾರ್ವಜನಿಕರಿಗೆ ನಿರಂತರ ಸಮಸ್ಯೆ ಉಂಟುಮಾಡುತ್ತಿದೆ ಎಂದು ಟೀಕೆಗೆ ಗುರಿಯಾಗಿದ್ದ ಈ ಚಟುವಟಿಕೆಯಲ್ಲಿ ಇದೀಗ ಲಾರಿ ಚಾಲಕನೇ ಬಲಿಯಾಗಿರುವುದು ದುಃಖಕರ ಸಂಗತಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.