ರಾಯಚೂರು: ದ್ವಿಚಕ್ರ ವಾಹನ ಕಳ್ಳತನ ಪ್ರಕರಣವೊಂದನ್ನು ಭೇದಿಸಿರುವ ರಾಯಚೂರು ಪೊಲೀಸರು, ಇಬ್ಬರು ಪದವಿ ವಿದ್ಯಾರ್ಥಿಗಳು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ರಾಯಚೂರು ನಗರದ ಸರ್ಕಾರಿ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ ಬಿಎ ವಿದ್ಯಾರ್ಥಿ ಆಕಾಶ್, ಬಿಕಾಂ ವಿದ್ಯಾರ್ಥಿ ಕಾರ್ತಿಕ್ ಹಾಗೂ ಸ್ಥಳೀಯ ನಿವಾಸಿ ಆಂಜನೇಯ ಎಂದು ಗುರುತಿಸಲಾಗಿದೆ. ಮೇ 25ರಂದು ವಿದ್ಯಾರ್ಥಿ ನಾರಾಯಣ ಅವರಿಗೆ ಸೇರಿದ ಬೈಕ್ ಕಳವಾಗಿದ್ದು, ಈ ಸಂಬಂಧ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಕಳ್ಳತನಕ್ಕೊಳಗಾದ ಬೈಕ್‌ನ ನಂಬರ್ ಪ್ಲೇಟ್ ಹಾಗೂ ಕೆಲವು ಬಿಡಿಭಾಗಗಳನ್ನು ಬದಲಾಯಿಸಿ ಅದನ್ನು ಮಾರಾಟ ಮಾಡಿರುವ ಮಾಹಿತಿ ಸಂಗ್ರಹಿಸಿದರು. ಈ ನಡುವೆ, ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟದ ಜಾಹೀರಾತಿನ ಫೋಟೋವೊಂದು ನಾರಾಯಣ ಅವರ ಮೊಬೈಲ್‌ಗೆ ಸ್ನೇಹಿತರ ಮೂಲಕ ತಲುಪಿತ್ತು.
ಆ ಫೋಟೋವನ್ನು ಗಮನದಿಂದ ಪರಿಶೀಲಿಸಿದ ನಾರಾಯಣ, ಮಾರ್ಪಾಡು ಮಾಡಲಾಗಿದ್ದ ವಾಹನ ತನ್ನದೇ ಎಂಬುದನ್ನು ಗುರುತಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.





