ಪುತ್ತೂರು: ಪುತ್ತೂರು–ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಹಾರಾಡಿ ರೈಲ್ವೇ ಸೇತುವೆ ಕೆಳಭಾಗದ ರಸ್ತೆಯಲ್ಲಿ ಕಾಂಕ್ರೀಟ್ ಹಾಕುವ ಕೆಲಸ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ 18ರಿಂದ ಜುಲೈ 18ರವರೆಗೆ ಆ ಭಾಗದಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಾಮಗಾರಿ ಸುಗಮವಾಗಿ ನಡೆಯಲು ರಸ್ತೆ ಮುಚ್ಚುವ ಅಗತ್ಯವಿದೆ ಎಂದು ಪುತ್ತೂರು ಲೋಕೋಪಯೋಗಿ ಇಲಾಖೆ, ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಮನವಿಯನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು ನಿರ್ದಿಷ್ಟ ಅವಧಿಗೆ ರಸ್ತೆ ಸಂಚಾರ ಸ್ಥಗಿತಗೊಳಿಸಲು ಅನುಮೋದನೆ ನೀಡಿದ್ದಾರೆ.
ಸಂಚಾರ ನಿರ್ಬಂಧ ಜಾರಿಯಿರುವ ಅವಧಿಯಲ್ಲಿ ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುವ ವಾಹನಗಳು ಪುತ್ತೂರು ಖಾಸಗಿ ಬಸ್ ನಿಲ್ದಾಣದ ಮಾರ್ಗವಾಗಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆ ಮೂಲಕ ಕೋಟೆಚಾ ಹಾಲ್ ಸಮೀಪ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸಿ ಸಂಚರಿಸಬೇಕಾಗಿದೆ.
ಇನ್ನೊಂದೆಡೆ, ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಬರುವ ವಾಹನಗಳು ಕೋಟೆಚಾ ಹಾಲ್ ಮಾರ್ಗವಾಗಿ ಎಪಿಎಂಸಿ ರಸ್ತೆಯನ್ನು ಬಳಸಿಕೊಂಡು ಪುತ್ತೂರು ಮುಖ್ಯರಸ್ತೆಗೆ ತಲುಪುವಂತೆ ಸೂಚಿಸಲಾಗಿದೆ.





