ಬಂಟ್ವಾಳ: ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಐದು ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಅಲ್ಲಿಪಾದೆಯ ಅನೇಜಾ ನಿವಾಸಿ ಹಾಗೂ ಎಸ್‌ವಿಎಸ್ ದೇವಳ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಹರ್ನಿಕಾ (5) ಎಂದು ಗುರುತಿಸಲಾಗಿದೆ.
ಹರ್ನಿಕಾ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಶುಕ್ರವಾರದವರೆಗೆ ಶಾಲೆಗೆ ಹಾಜರಾಗಿ ಸಹಪಾಠಿಗಳೊಂದಿಗೆ ಸಾಮಾನ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಳು. ಆದರೆ ಮರುದಿನ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ವೈದ್ಯಕೀಯ ಸಲಹೆ ಪಡೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನೀಡಲಾಗುತ್ತಿದ್ದರೂ ಆರೋಗ್ಯ ಸ್ಥಿತಿ ಸುಧಾರಿಸದೆ ಮಂಗಳವಾರ ಆಕೆ ಮೃತಪಟ್ಟಿದ್ದಾಳೆ.
ಪ್ರಜ್ವಲ್ ಮತ್ತು ಛಾಯಾ ದಂಪತಿಯ ಏಕೈಕ ಪುತ್ರಿಯಾಗಿದ್ದ ಹರ್ನಿಕಾ, ಅಲ್ಲಿಪಾದೆಯಲ್ಲಿರುವ ಅಜ್ಜಿಯ ಮನೆಯಿಂದ ಪ್ರತಿದಿನ ಶಾಲೆಗೆ ತೆರಳುತ್ತಿದ್ದಳು. ಈ ವರ್ಷದ ಆರಂಭದಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ಆಟೋರಿಕ್ಷಾ ಅಪಘಾತದಲ್ಲಿ ಗಾಯಗೊಂಡಿದ್ದ ಆಕೆ ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಳು.
ಬಾಲಕಿಯ ನಿಧನ ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಗಣ್ಯರು ಕುಟುಂಬದ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.





