ಕಡಬ: ಅಭಿವೃದ್ಧಿಗೆ ಸರ್ಕಾರದ ಅನುದಾನವನ್ನೇ ಕಾಯದೆ ಗ್ರಾಮಸ್ಥರು ಒಗ್ಗೂಡಿ ಜನೋಪಯೋಗಿ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದಲ್ಲಿ ನಡೆದಿದೆ.
ಪಂಜೋಡಿ, ಪೊನ್ನೆತ್ತೂರು ಹಾಗೂ ಮಾಯಿಪಾಜೆ ಭಾಗದ ಗ್ರಾಮಸ್ಥರು ತಮ್ಮ ಸಹಕಾರ ಮತ್ತು ಶ್ರಮದಾನದ ಮೂಲಕ ಬಜಕೆರೆ ಸೇತುವೆ ಸಮೀಪ ನೂತನ ಬಸ್ ತಂಗುದಾಣವನ್ನು ನಿರ್ಮಿಸಿದ್ದಾರೆ.
ಈ ಭಾಗದ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆ ಮತ್ತು ಬಿಸಿಲಿನ ಸಂದರ್ಭದಲ್ಲಿ ಎದುರಿಸುತ್ತಿದ್ದ ತೊಂದರೆಯನ್ನು ಮನಗಂಡು ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳೀಯರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬಸ್ ತಂಗುದಾಣವು ಈಗ ಸಾರ್ವಜನಿಕ ಬಳಕೆಗೆ ಸಿದ್ಧವಾಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮಸ್ಥರ ಒಗ್ಗಟ್ಟು, ಸಹಕಾರ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಯ ಪ್ರತೀಕವಾಗಿ ಈ ಯೋಜನೆ ಹೊರಹೊಮ್ಮಿದ್ದು, ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಇದ್ದರೆ ಅನೇಕ ಜನೋಪಯೋಗಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಸ್ಥಳೀಯರ ಈ ಪ್ರಯತ್ನವು ಇತರ ಗ್ರಾಮಗಳಿಗೂ ಮಾದರಿಯಾಗಿದ್ದು, ಸ್ವಯಂಪ್ರೇರಿತ ಜನಸಹಭಾಗಿತ್ವದಿಂದ ಗ್ರಾಮಾಭಿವೃದ್ಧಿಗೆ ಹೊಸ ದಿಕ್ಕು ತೋರಿಸಿದೆ.





