ನೇಪಾಳ: ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹದ ಬಳಿಕ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ಒಂಬತ್ತು ದಿನಗಳ ಬಳಿಕ ಜೀವಂತವಾಗಿ ರಕ್ಷಿಸಲಾಗಿದೆ.
Trishuli 3A ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ ಸಂಜಯ್ ಸಾಹ್ ಮತ್ತು ಕಬೀರ್ ಮಹರ್ಜನ್ ಅವರನ್ನು ನೇಪಾಳದ ಸೇನೆ ಹಾಗೂ ಸಶಸ್ತ್ರ ಪೊಲೀಸ್ ಪಡೆ ಶುಕ್ರವಾರ ಸುರಕ್ಷಿತವಾಗಿ ಹೊರತಂದಿದೆ. ಇಬ್ಬರೂ ಸುರಂಗದ ಸುಮಾರು 170 ಮೀಟರ್ ಒಳಭಾಗದಲ್ಲಿ ಪತ್ತೆಯಾಗಿದ್ದರು.
ರಕ್ಷಣಾ ತಂಡಕ್ಕೆ ಸುರಂಗದ ಒಳಗಿನಿಂದ ಮಾನವ ಧ್ವನಿಗಳು ಕೇಳಿಬಂದ ಬಳಿಕ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿತ್ತು. ಧ್ವನಿಯ ಮೂಲಕ ಸಂಪರ್ಕ ಸಾಧಿಸಿದ ನಂತರ ರಕ್ಷಣಾ ಸಿಬ್ಬಂದಿ ಇಬ್ಬರನ್ನೂ ಪತ್ತೆಹಚ್ಚಿ ಹೊರಗೆ ಕರೆತಂದಿದ್ದಾರೆ.
ಸಂಜಯ್ ಸಾಹ್ ಅವರು ಸುರಂಗದಿಂದ ಹೊರಬಂದ ಬಳಿಕ, ಒಳಗೆ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದರಿಂದ ಇತರರನ್ನೂ ಜೀವಂತವಾಗಿ ರಕ್ಷಿಸುವ ನಿರೀಕ್ಷೆ ಹೆಚ್ಚಾಗಿದೆ.
ರಕ್ಷಿಸಲ್ಪಟ್ಟ ಇಬ್ಬರನ್ನೂ ಚಿಕಿತ್ಸೆಗಾಗಿ ಕಠ್ಮಂಡುವಿಗೆ ಕರೆದೊಯ್ಯಲಾಗಿದೆ. ಸಂಜಯ್ ಸಾಹ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.





