ಮಧ್ಯಪ್ರದೇಶ: ನದಿಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯವನ್ನು ಕಂಡು ಹೆಚ್ಚಿನವರು ದೂರು ನೀಡುತ್ತಿದ್ದರು. ಆದರೆ ಬಿಯೋರಾದ 19 ವರ್ಷದ ಬಿಟ್ಟು ತಬಾಹಿ ಮಾತ್ರ ದೂರು ನೀಡುವುದಕ್ಕಿಂತ ಸ್ವತಃ ನದಿಗಿಳಿದು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.
ಗಣರಾಜ್ಯೋತ್ಸವದ ದಿನವಾದ ಜನವರಿ 26ರಂದು ಬಿಟ್ಟು ಕೆಲ ಸ್ನೇಹಿತರೊಂದಿಗೆ ಅಜ್ನಾರ್ ನದಿಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಸ್ನೇಹಿತರು ಹಿಂದೆ ಸರಿದರೂ, ಬಿಟ್ಟು ಮಾತ್ರ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ.
ಕೈಯಲ್ಲಿದ್ದ ಸರಳ ಉಪಕರಣಗಳು ಹಾಗೂ ಸ್ವಂತ ಹಣದಲ್ಲಿ ಖರೀದಿಸಿದ ಕಸದ ಚೀಲಗಳ ಸಹಾಯದಿಂದ ಅವರು ನದಿಯಲ್ಲಿದ್ದ ಪ್ಲಾಸ್ಟಿಕ್, ಬಾಟಲಿಗಳು, ತ್ಯಾಜ್ಯ ಮತ್ತು ದಟ್ಟವಾಗಿ ಬೆಳೆದಿದ್ದ ಪಾಚಿಯನ್ನು ತೆರವುಗೊಳಿಸುತ್ತಾ ಬಂದಿದ್ದಾರೆ. ಸುಮಾರು ಒಂದೂವರೆ ತಿಂಗಳಲ್ಲಿ ಎರಡು ಟ್ರಕ್‌ಗಳಿಗೂ ಹೆಚ್ಚು ತ್ಯಾಜ್ಯವನ್ನು ತೆಗೆದುಹಾಕಿದ್ದು, ದಿನಕ್ಕೆ ಸರಾಸರಿ 10 ಕೆ.ಜಿ.ಯಷ್ಟು ಕಸವನ್ನು ತೆಗೆಯುತ್ತಿದ್ದರೆಂದು ವರದಿಯಾಗಿದೆ.
ಪ್ರತಿದಿನ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ನದಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದ ಬಿಟ್ಟುಗೆ ಆರಂಭದಲ್ಲಿ ಹಲವರಿಂದ ಟೀಕೆಗಳೂ ಎದುರಾಗಿದ್ದವು. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಲು ಈ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಆದರೆ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಅವರು ತಮ್ಮ ಕೆಲಸವನ್ನು ಮುಂದುವರಿಸಿದರು.
ಬಿಟ್ಟುವಿನ ನಿರಂತರ ಪ್ರಯತ್ನದಿಂದ ನದಿಯ ಸ್ವಚ್ಛತೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ನದಿಯ ನೀರಿನ ಹರಿವು ಮತ್ತು ಸುತ್ತಮುತ್ತಲಿನ ಪ್ರದೇಶದ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡಿದೆ ಎಂದು ವರದಿಗಳು ತಿಳಿಸಿವೆ.
ಬಿಟ್ಟುವಿನ ಈ ಪ್ರಯತ್ನಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಅವರನ್ನು ತಮ್ಮ “Monday Motivation” ಎಂದು ಕರೆದಿದ್ದಾರೆ.
ಒಬ್ಬ ಯುವಕನ ಪ್ರಯತ್ನ ನದಿಯನ್ನು ಬದಲಾಯಿಸಬಲ್ಲದಾದರೆ, ಇಂತಹ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರು ಕೈಜೋಡಿಸಿದರೆ ಇನ್ನಷ್ಟು ದೊಡ್ಡ ಬದಲಾವಣೆ ಸಾಧ್ಯವಲ್ಲವೇ ಎಂಬ ಪ್ರಶ್ನೆಯನ್ನೂ ಈ ಘಟನೆ ಮುಂದಿಡುತ್ತದೆ.





