Kadeshivalaya : ಫೆ. 15, ಶನಿವಾರದಂದು, ಯುವಶಕ್ತಿ ಕಡೇಶಿವಾಲಯದ ಬಹು ನಿರೀಕ್ಷಿತ ‘ಸಂತೃಪ್ತಿ’ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಕಡೇಶಿವಾಲಯದ ಪೆರ್ಲಾಪು ಶಾಲಾ ವಠಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ದ.ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆ ಪೆರ್ಲಾಪುಗೆ ನಿರ್ಮಿಸಿ ಕೊಡಲಾದ ಶಾಲಾ ಕೊಠಡಿಗಳ ಲೋಕಾರ್ಪಣೆ ಮಾಡಲಾಯಿತು. ಇದರ ಜೊತೆಗೆ ರಕ್ತದಾನ ಶಿಬಿರ, YSK ವೆಬ್ ಸೈಟ್ ಅನಾವರಣ, ಸನ್ಮಾನ ಕಾರ್ಯಕ್ರಮ, ಸಭೆ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತ್ತು.
"ಪ್ರಧಾನಿ ಮಂತ್ರಿಯ ಯೋಜನೆಗಳನ್ನು ಕಡೇಶಿವಾಲಯ ಗ್ರಾಮದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಬೇಕು" -ದ. ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ.
"ನಾವು ಸರಕಾರದಿಂದ ಮಾಡಬೇಕಾದ ಕೆಲಸ ಯುವಶಕ್ತಿ ಕಡೇಶಿವಾಲಯ ಮಾಡುತ್ತಿದೆ "- ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು.
ಯುವಶಕ್ತಿಯ ಮಹತ್ವ - ಗಣ್ಯರ ಉಲ್ಲೇಖಗಳು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಯುವ ಜನತೆಯಲ್ಲಿರುವ ಶಕ್ತಿಯನ್ನು ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಯುವಶಕ್ತಿಯಂತಹ ಸಂಘಟನೆಗಳ ಅವಶ್ಯಕತೆವಿದೆ. ಸಮಾಜದಲ್ಲಿ ಸಹಾಯ ಬಯಸುವವರನ್ನು ಗುರಿಯಾಗಿಸಿಕೊಂಡು ಅವರಿಗೆ ಸೇವೆಯನ್ನು ನೀಡುವುದರ ಮೂಲಕ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಿರುಹುದು ಹೆಮ್ಮೆಯ ವಿಷಯ ಎಂದು ನುಡಿದರು.
ಬಂಟ್ವಾಳ ತಾಲೂಕಿನ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಯುವಶಕ್ತಿ ಸಂಘಟನೆಯು ನಾವು ಸರಕಾರದಿಂದ ಮಾಡಬೇಕಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಯುವಶಕ್ತಿ ಕಡೇಶಿವಾಲಯದ ಯುವಕರು ಊರಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಬಹಳಷ್ಟು ಸಮಾಜಸೇವೆ ಮಾಡುತ್ತಿದ್ದಾರೆ. ಇವರ ಎಲ್ಲಾ ಕಾರ್ಯಕ್ಕೆ ನನ್ನ ಸಹಕಾರ ಮತ್ತು ಬೆಂಬಲವಿದೆ ಎನ್ನುವ ಭರವಶೆಯ ಮಾತಿನ ಮೂಲಕ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳೂರಿನ ಖ್ಯಾತ ಮನಃಶಾಸ್ತ್ರಜ್ಞ ದಿಶಾರಾಘ್ ಶೆಟ್ಟಿ ಮಾತನಾಡಿ, ಯುವಶಕ್ತಿ ಕಡೇಶಿವಾಲಯ ಸಂಘಟನೆಯು ನಿಸ್ವಾರ್ಥ ಮನೋಭಾವದಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಮುಂದಕ್ಕೆ ಇನ್ನಷ್ಟು ಸಮಾಜಮುಖಿ ಕೆಲಸ ಇವರ ಮೂಲಕ ನಡೆಯಲಿ ಎಂದು ಆಶಿಸಿದರು.
ಮುಖ್ಯ ಅಥಿತಿಯಾಗಿ ದೈಜಿವರ್ಲ್ಡ್ ವಾಹಿನಿ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮಾತನಾಡಿ, ನಮ್ಮ ದೇಶ ಯುವಕರ ದೇಶ, ದೇಶದ 65% ಜನಸಂಖ್ಯೆ 35 ವರ್ಷ ಕೆಳಪಟ್ಟವರು, ಮನುಷ್ಯನಿಗೆ ಜೀವನದಲ್ಲಿ ಸಂತೃಪ್ತಿ ಮತ್ತು ಮಾನವೀಯತೆ ಮಾತ್ರ ಜೀವನದಲ್ಲಿ ಖುಷಿ ನೀಡಲು ಸಾಧ್ಯ. ಈ ಎರಡು ದ್ಯೇಯೆಗಳನ್ನು ಯುವಶಕ್ತಿ 14 ವರುಷಗಳ ಪಯಣದಲ್ಲಿ ಅಳವಡಿಸಿಕೊಂಡಿದೆ ಎಂದರು. ತುಳುನಾಡಿನ ಯುವಕರಿಗೆ ಯುವಶಕ್ತಿ ಕಡೇಶಿವಾಲಯ ಮಾದರಿ ಎಂದು ನುಡಿದರು.
ಪುತ್ತೂರಿನ ಅಕ್ಷಯ ಕಾಲೇಜಿನ ಅಧ್ಯಕ್ಶರಾದ ಜಯಂತ ನಡುಬೈಲ್ ಮಾತನಾಡಿ, ಯುವಶಕ್ತಿ ಕಡೇಶಿವಾಲಯ ಸಂಘಟನೆ ಸಮಾಜಸೇವೆಯ ಮೂಲಕ ಬದುಕನ್ನು ಹೇಗೆ ಸಾರ್ಥಕಗೊಳಿಸಬಹುದು ಎನ್ನುವುದನ್ನು ತಿಳಿಸಿಕೊಡುತ್ತದೆ, ಯುವಕರ ಬೆನ್ನಿಗೆ ನಾನು ಸದಾ ಇದ್ದೇನೆ ಎನ್ನುವ ಭರವಸೆಯನ್ನು ಕೊಟ್ಟರು.
ಕಾರ್ಯಕ್ರಮಕ್ಕೆ ಇನ್ನಿತರ ಗಣ್ಯರ ಉಪಸ್ಥಿತಿ:
ಈ ವಿಜೃಂಭಣೆಯ ಕಾರ್ಯಕ್ರಮಕ್ಕೆ, ಕಡೇಶಿವಾಲಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ನಡ್ಯೇಲು, ಸಂಜೆಯ ಸಭಾವೇದಿಕೆಯಲ್ಲಿ ಕಡೇಶಿವಾಲಯ ಗ್ರಾ. ಪಂ. ಅಧ್ಯಕ್ಷೆ ಭಾರತಿ. ಎಸ್ .ರಾವ್, ಬೆಂಗಳೂರು ಕೆನರಾ ಗ್ರೂಪ್ ನ ಉತ್ತಮ ಶೆಟ್ಟಿ ಬೇಂಗದಡಿ, ಮುಂಬೈ ಉದ್ಯಮಿ ನಾರಾಯಣ ನಾಯ್ಕ ಪಿಲಿಂಗಳ, ಕಡೇಶಿವಾಲಯ ಯುವಶಕ್ತಿಯ ಗೌರವಾಧ್ಯಕ್ಷರಾದ ವಿದ್ಯಾಧರ ರೈ ಅಮೈ ಭಾಗವಹಿಸಿದ್ದರು.
ಇವರ ಜೊತೆಗೆ, ಪ್ರಗತಿಪರ ಕೃಷಿಕ ಸಾಂತಪ್ಪ ಪೂಜಾರಿ ಪಚ್ಚಡಿಬೈಲ್, ಕಡೇಶಿವಾಲಯ ಪೆರ್ಲಾಪ್ ಶಾಲಾ ಮುಖ್ಯೋಪಾಧ್ಯಾಯ ಬಾಬು ಪೂಜಾರಿ. ಕೆ, ಎಲ್ಐಸಿ ಇಂಡಿಯಾ ಬಂಟ್ವಾಳದ ಮಧ್ವರಾಜ್ ಕಲ್ಮಾಡಿ, ಎಸ್ ಡಿ ಎಂ ಸಿ ಅಧ್ಯಕ್ಷ ಹರೀಶ್ ರಾವ್ ನೆಕ್ಕಿಲಾಡಿ, ನಿವೃತ್ತ ಎಂಸಿಎಫ್ ಉದ್ಯೋಗಿ ಸತೀಶ್ ಭಂಡಾರಿ ಅಮೈ ಉಪಸ್ಥಿತರಿದ್ದರು.
ಯುವ ಶಕ್ತಿಯ 14 ವರ್ಷದ ಸಮಾಜ ಸೇವಾ ಪಯಣ:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಎಂಬ ಪುಟ್ಟ ಗ್ರಾಮದಲ್ಲಿ ಗ್ರಾಮದ ಕೆಲ ಯುವಕರರಿಂದ ಮತ್ತು ಹಿರಿಯರ ಮಾರ್ಗದರ್ಶನದಿಂದ ಹುಟ್ಟಿದ ಯುವಶಕ್ತಿ ಕಡೇಶಿವಾಲಯ ಸಂಘಟನೆ 14 ವರುಷಗಳಿಂದ ಒಟ್ಟು 1,13,92,002 ರೂಪಾಯಿಗಳ ಬೃಹತ್ ಮೊತ್ತವನ್ನು ಸಮಾಜಕ್ಕೆ ನೀಡಿದ ಹಿರಿಮೆಗೆ ಪಾತ್ರವಾಗಿದೆ. ಈ ಎಲ್ಲಾ ಸಮಾಜಮುಖಿ ಸೇವೆಗಳ ವಿವರಣೆಯನ್ನು ನೆರೆದ ಸಭಿಕರಿಗೆ ವಿಡಿಯೋ ಮೂಲಕ ತಿಳಿಸಿಕೊಡಲಾಯಿತು.
ಗೌರವ ಸಮಾರಂಭ – ಯುವ ರತ್ನ ಪ್ರಶಸ್ತಿ
ಯುವರತ್ನ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಯುವ ಕಲಾರತ್ನ ಪ್ರಶಸ್ತಿ ನಟ ನಿರ್ದೇಶಕ ಅನೀಶ್ ಪೂಜಾರಿ ವೇಣೂರು, ಪ್ರಸಿದ್ಧ ದೈವ ನರ್ತಕ ಲೋಕಯ್ಯ ಶೇರಾ ಅವರಿಗೆ ಧರ್ಮರತ್ನ, ಖ್ಯಾತ ಕಬ್ಬಡಿ ಪಟು ರೋಹಿತ್ ಮಾರ್ಲರವರಿಗೆ ಯುವ ಕ್ರೀಡಾ ರತ್ನ ಎನ್ನುವ ಮೂರೂ ರೀತಿಯ ಯುವರತ್ನ ಗೌರವವನ್ನು ನೀಡಿ ಸನ್ಮಾನಿಸಲಾಯಿತು. ಯುವ ಸೇವಾ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದ ಸಮಾಜಸೇವಕ ರವಿ ಕಟಪಾಡಿ ಅನುಪಸ್ಥಿತಿಯಲ್ಲಿ ಅವರ ಬಗ್ಗೆ ವಿಡಿಯೋ ಪ್ರದರ್ಶಿಸಲಾಯಿತು. ಶಾಲಾ ಕೊಠಡಿ ಗುತ್ತಿಗೆದಾರ ವಹಿಸಿಕೊಂಡಿದ್ದ ಯುವಶಕ್ತಿಯ ಕಿರಣ್ ಶೆಟ್ಟಿ ನಡ್ಯೇಲು ಗೆ ಗೌರವಿಸಿ ಅಭಿನಂದಿಸಿದರು.
ಅಭಿನಂದನೆ ಮತ್ತು ಕಾರ್ಯಕ್ರಮ ನಿರ್ವಹಣೆ:
ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷರಾದ ದೇವಿಪ್ರಸಾದ್ ಬಿ, ಉಪಾಧ್ಯಕ್ಷ ಗೋಪಾಲಕೃಷ್ಣ ನಾಯಕ್, ಕಾರ್ಯದರ್ಶಿ ಸುರೇಶ ಬನಾರಿ, ಕೋಶಾಧಿಕಾರಿ ಅಶೋಕ್ ಪ್ರತಾಪನಗರ, ಜೊತೆ ಕಾರ್ಯದರ್ಶಿ ತಿಲಕ್ ಮುಂಡಾಲ ಮತ್ತು ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಶ್ರಮವಹಿಸಿದ್ದರು. ಗಂಗಾಧರ ಮಾಣಿ ಪ್ರಾರ್ಥಿಸಿದರೆ, ದಿನೇಶ್ ಬಡೆಕೊಟ್ಟು ಸ್ವಾಗತಿಸಿದರು. ವಿಜಿತ್ ಸಂಪೋಳಿ ವಂದಿಸಿದರು, ಅವಿನಾಶ್ ಕಡೇಶಿವಾಲಯ ಮತ್ತು ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.